ಕಾಳಮಾರಿ

ಲೀಷ್ಮೇನಿಯಾ ಡೊನವಾನಿ ಎಂಬ ಪರಪುಷ್ಪ ಜೀವಿಯಿಂದ ಪರಿಣಮಿಸುವ ಸಾಂಕ್ರಾಮಿಕ ವ್ಯಾಧಿ. ಬಹಳಕಾಲ ಅಕ್ರಮವಾಗಿ ಜ್ವರ ಬರುವುದು, ತುಂಬಕಾಲ ಎಳೆದಾಡುವುದು, ಗುಲ್ಮದ, ಪಿತ್ತಕೋಶದ ಊತ, ದೇಹ ಸೊರಗುವುದು, ರಕ್ತಹೀನತೆ ಮೊದಲಾದವು ಇದರ ಲಕ್ಷಣಗಳು. ಈ ರೋಗಚಿಹ್ನೆಗಳು ಅಕಸ್ಮಾತ್ ಅಥವಾ ಕ್ರಮವಾಗಿ ಕಾಣಿಸಿಕೊಳ್ಳಬಹುದು. ಕೆಲವು ಸಂದರ್ಭಗಳಲ್ಲಿ ರೋಗ ಬಹಳ ಚುರುಕಾಗಿ ಬಂದು ಚಳಿ, ತುಂಬ ಜ್ವರ ಮತ್ತು ವಾಂತಿ ಮುಂತಾದ ಲಕ್ಷಣಗಳುಂಟಾಗಬಹುದು. ಇನ್ನು ಕೆಲವು ಸಂದರ್ಭಗಳಲ್ಲಿ ವಿಷಮಶೀತಜ್ವರದ (ಟೈಫಾಯಿಡ್) ಲಕ್ಷಣ ತೋರಬಹುದು. ಒಂದು ವಾರದಲ್ಲಿ 103 ರಿಂದ 104 ಫ್ಯಾ. ವರೆಗೂ ಜ್ವರ ಏರಬಹುದು. ಇನ್ನೂ ಕೆಲವು ಸಂದರ್ಭಗಳಲ್ಲಿ ಹೆಚ್ಚು ಜ್ವರ ಕಾಣಿಸಿಕೊಳ್ಳದೆ ಅಗೋಚರವಾಗಿ, ನಿಧಾನವಾಗಿ ರೋಗ ಉಂಟಾಗಬಹುದು. ಚುರುಕಿನಿಂದ ರೋಗ ಉಂಟಾದಾಗ ದಿವಸಕ್ಕೆ ಎರಡು ಸಲ ಬಿಟ್ಟು ಬಿಟ್ಟು ಚಳಿ-ಜ್ವರ ಬರುತ್ತದೆ; ಜ್ವರ ನಿಂತಾಗ ಬೆವರುತ್ತದೆ. ಮಧ್ಯಾಹ್ನ ಬಹಳ ಮುಂಚೆಯೇ ಜ್ವರ ಬಂದು ಸಾಯಂಕಾಲ ಇಳಿದು ಪುನಃ ಅರ್ಧ ರಾತ್ರಿಗೆ ಸ್ವಲ್ಪ ಮುಂಚೆಯೇ ಜ್ವರ ಪ್ರಾರಂಭವಾಗುತ್ತದೆ. ಪ್ರಾರಂಭದಲ್ಲಿ 2ರಿಂದ 6ವಾರಗಳು ಈ ರೀತಿ ಆಗಬಹುದು. ರೋಗ ಇನ್ನೂ ಎಳೆದಾಡುವುದಾದರೆ ಪುನಃ ಮೇಲ್ಕಂಡಂತೆ ಜ್ವರ ಉಂಟಾಗಬಹುದು. ಈ ರೋಗದ ವ್ಯಾಪ್ತಿ ಭಾರತದ ಅಸ್ಸಾಂ, ಬಂಗಾಳ, ಬಿಹಾರ್, ತಮಿಳುನಾಡು, ಸಿಕ್ಕಿಂ ಪ್ರಾಂತ್ಯಗಳು, ಚೀನ, ರಷ್ಯ ದೇಶದ ದಕ್ಷಿಣಭಾಗ, ಮೆಡಿಟರೇನಿಯನ್ ಪ್ರದೇಶಗಳು, ಆಫ್ರಿಕ, ಪರಗ್ವೆ, ಆರ್ಜೆಂಟೀನ ಮತ್ತು ಬ್ರೆಜಿûಲ್‍ಗಳಿಗೆ ಸೀಮಿತವಾಗಿದೆ.

ಈ ರೋಗದ ಹರಡುವಿಕೆಗೆ ಮೂರು ಮುಖ್ಯಾಂಶಗಳಿರಬೇಕು. ರೋಗದ ಕ್ರಿಮಿಗಳ ಆಸರೆಯಾದ ಒಬ್ಬ ರೋಗಿ, ಕ್ರಿಮಿಗಳನ್ನು ಒಬ್ಬರಿಂದೊಬ್ಬರಿಗೆ ಹರಡಲು ಸ್ಯಾಂಡ್ ಫ್ಲೈ ಎಂಬ ನೊಣ, ರೋಗಕ್ಕೆ ಸುಲಭವಾಗಿ ತುತ್ತಾಗತಕ್ಕ ಪ್ರಜಾಸಂಖ್ಯೆ. ರೋಗ ನಿವಾರಣೋಪಾಯಗಳು ಮುಖ್ಯವಾಗಿ ರೋಗಗ್ರಸ್ತರನ್ನು ಬೇರ್ಪಡಿಸುವುದು, ರೋಗಪೀಡಿತ ಪ್ರದೇಶಗಳನ್ನು ಸ್ವಲ್ಪ ಕಾಲ ತೊರೆಯುವುದು, ಸ್ಯಾಂಡ್ ಫ್ಲೈ ನೊಣಗಳ ನಾಶ, ಇತ್ಯಾದಿ. ಆಂಟಿಮೊನಿ ಲೋಹದಿಂದ ತಯಾರಿಸಿದ ಔಷಧೋಪಚಾರಗಳಿಂದ ರೋಗಿ ಗುಣಗೊಳ್ಳುವುದೇ ಅಲ್ಲದೆ ರೋಗ ಇತರರಿಗೆ ಹರಡುವುದೂ ನಿಲ್ಲುತ್ತದೆಂದು ಗೊತ್ತಾಗಿದೆ.

 

(ಎಚ್.ಎಸ್.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ